ಯೂಜೀನ್ ಗ್ಲಾಡ್‍ಸ್ಟನ್, ಓನೀಲ್
 	1888-1953. ನೊಬೆಲ್ ಪಾರಿತೋಷಿಕ ಪಡೆದ ಅಮೆರಿಕದ ಪ್ರಸಿದ್ಧ ನಾಟಕಕಾರ. ಪ್ರಖ್ಯಾತ ನಟನಾಗಿದ್ದ ಜೇಮ್ಸ್ ಓನೀಲ್ ಈತನ ತಂದೆ. ಚಿಕ್ಕವನಾಗಿದ್ದಾಗ ತಂದೆಯ ನಾಟಕ ಕಂಪನಿಯೊಂದಿಗೆ ಓನೀಲ್ ಪ್ರಯಾಣ ಮಾಡುತ್ತಿದ್ದ. ಅನೇಕ ಕ್ಯಾಥೋಲಿಕ್ ಶಾಲೆಗಳಲ್ಲಿ ಓದಿದ ಈತ ಆಗಾಗ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಬಗೆಯ ಅಲೆದಾಟದಿಂದ ಇವನ ನಾಟಕೀಯ ಅನುಭವ ಶ್ರೀಮಂತಗೊಂಡಿತು. ಇವನು ಪತ್ರಿಕೋದ್ಯಮಿಯಾಗಿಯೂ ಕೆಲಕಾಲ ಕೆಲಸ ಮಾಡಿದ. ಮುಖ್ಯವಾಗಿ ಇವನು ಸಮುದ್ರಯಾನವನ್ನು ಕೈಗೊಂಡಾಗ ಅನೇಕ ಸ್ಥಳಗಳಿಗೆ ಭೇಟಿಕೊಡುವ ಅವಕಾಶ ದೊರೆಯಿತು. ಆಗ ಅವಲೋಕನ ಮಾಡಿದ, ಆಲೋಚಿಸಿದ ಮತ್ತು ತನ್ನ ಸಹಯಾತ್ರಿಕರ ಜೀವನದಲ್ಲಿ ಅದೃಷ್ಟ ನಡೆಸಿದ ಆಟವನ್ನು ಕಂಡ. 1912-13ರಲ್ಲಿ ಕ್ಷಯರೋಗ ಪೀಡಿತನಾಗಿ ಆಸ್ಪತ್ರೆ ಸೇರಿದ. ಈ ಸಂದರ್ಭದಲ್ಲಿ ಬಹಳಷ್ಟು ನಾಟಕ ಸಾಹಿತ್ಯವನ್ನು, ಅದರಲ್ಲೂ ಇಬ್ಸೆನ್ ಮತ್ತು ಸ್ಟ್ರೀಂಡ್‍ಬರ್ಗ್‍ರ್ ನಾಟಕಗಳನ್ನು ಅಧ್ಯಯನ ಮಾಡಿದ. ಆಸ್ಪತ್ರೆಯಿಂದ ಹೊರಬಂದಾಗ ಈತ ಪ್ರಬುದ್ಧ ನಾಟಕಕಾರನಾಗಿದ್ದ. ಅನಂತರ ಓನೀಲ್ ನಾಟಕಗಳನ್ನು ಬರೆಯತೊಡಗಿದ. ಇವುಗಳಲ್ಲಿ ಹಲವು ನಾಟಕಗಳು `ಮೆಸಾಚುಸೆಟ್ಸ್ ' ನ ಪ್ರಾವಿನ್ಸ್ ಟೌನಿನಲ್ಲಿ, ಪ್ರಾವಿನ್ಸ್ ಟೌನ್‍ನಟರೆಂಬ ಉತ್ಸಾಹಿ ನಟರಿಂದ ರಂಗಭೂಮಿಯಲ್ಲಿ ಅಭಿನಯಗೊಂಡವು. ದಿ ಲಾಗ್ ವಾಯೋಜ್ ಹೋಮ್ ಎಂಬ ಹೆಸರಿನಲ್ಲಿ ಕಡಲಿನ ಅನುಭವದ ಆಧಾರದ ಮೇಲೆ ರಚನೆಗೊಂಡ ಏಕಾಂತ ನಾಟಕ 1917 ರಲ್ಲಿ ಪ್ರಯೋಗಗೊಂಡಿತು. ಏಳು ಏಕಾಂತ ನಾಟಕ ಚಕ್ರದಲ್ಲಿ ಈ ನಾಟಕವೂ ಬಂದು. ಉಳಿದ ನಾಟಕಗಳೆಂದರೆ: ದಿ ಮೂನ್ ಅಫ್ ದಿ ಕೆರಬೀಸ್, ಇನ್ ದಿ ಜೋನ್, ಬೌಂಡ್ ಈಸ್ಟ್ ಫಾರ್ ಕಾರ್ಡಿಫ್, ವೇರ್ ದಿ ಕ್ರಾಸ್ ಈಸ್ ಮೇಡ್, ದಿ ರೋಪ್, ಇಲ್. ಈ ಎಲ್ಲ ನಾಟಕಗಳೂ 1916-17ರ ಅವಧಿಯಲ್ಲಿ ರಚನೆಗೊಂಡಂಥವು. ಇಲ್ಲಿಂದ ಮುಂದೆ ಓನೀಲ್ 1934ರ ವರೆಗೆ ಅನೇಕ ನಾಟಕಗಳನ್ನು ಬರೆದ.

ಇವನ ಪೂರ್ಣ ಪ್ರಮಾಣದ ಮೊದಲ ನಾಟಕ ` ಬಿಯಾಂಡ್ ದಿ ಹೊರೈಸನ್ (1920) ಇದು ಗ್ರಾಮ್ಯ ವಸ್ತುವನ್ನುಳ್ಳ ವಾಸ್ತವಿಕ ನಾಟಕ. ಇದಕ್ಕೆ ಮೊದಲ ಬಾರಿ ಪುಲಿಟ್ಜರ್ ಪ್ರಶಸ್ತಿ ದೊರೆಯಿತು. ನ್ಯೂ ಯಾರ್ಕ್‍ನಲ್ಲಿ 1920ರಲ್ಲಿ ಈ ನಾಟಕದ ಪ್ರಯೋಗ ಆದಾಗ ಇವನಿಗೆ ಬಹಳ ಕೀರ್ತಿಬಂತು. ಇವನು ಶ್ರೇಷ್ಠ ನಾಟಕಕಾರ ಪಂಕ್ತಿಗೆ ಸೇರುವಂತಾಯಿತು. ಈ ನಾಟಕದ ಮೂಲಕ ಅಮೆರಿಕನ್ ರಂಗಭೂಮಿಗೆ ಒಂದು ಶಕ್ತಿ. ಗಾಂಭೀರ್ಯ ಪ್ರಾಪ್ತವಾಯಿತು. ಎಂಪರರ್ ಜೋನ್ಸ್ (1920)ಎಂಬ ನಾಟಕ ತನ್ನನ್ನು ತಾನೇ ರಾಜನೆಂದು ಸ್ವಯಂ ಘೋಷಿಸಿಕೊಂಡ ಒಬ್ಬ ನೀಗ್ರೋನನ್ನು ಕುರಿತದ್ದು. ಇದು `ಯತಾರ್ಥವಾದದ (ನ್ಯಾಚುರಲಿಸಂ) ನಾಟಕ. ಇದು ಓನೀಲನ ಯಶಸ್ವಿ ನಾಟಕಗಳಲ್ಲಿ ಒಂದು. ಅನ್ನಕ್ರಿಸ್ಟಿ(1921) ಎಂಬ ನಾಟಕ ಪತಿತ ಹೆಂಗಸೊಬ್ಬಳು ಪ್ರೇಮದ ಮೂಲಕ ಉದ್ಧಾರಗೊಂಡ ವಸ್ತುವನ್ನುಳ್ಳದ್ದು. ದಿ ಹೇರಿ ಏಪ್ (1922) ಅಭಿವ್ಯಕ್ತಿದಾದೀ ತಂತ್ರದಲ್ಲಿ (ಎಕ್ಸ್‍ಪ್ರೆಷನಿಸ್ಟಿಕ) ರಚನೆಗೊಂಡಿರುವ ನಾಟಕ. ಆಲ್ ಗಾಡ್ರ್ಸ್ ಚಿಲ್ಲುಮ್ ಗಾಟ್ ವಿಂಗ್ಸ್ (1924) - ಇದು ಬೆರಕೆ ವಿವಾಹದ ಬಗೆಗೆ ಬರೆದ ನಾಟಕ. ಡಿಸೈರ್ ಅಂಡರ್ ದಿ ಎಲ್ಮಸ್ (1924)- ನ್ಯೂ ಇಂಗ್ಲೆಂಡ್ ಫಾರಂ ಒಂದರಲ್ಲಿ ನಡೆದಂತೆ ಇದರ ವಸ್ತು ಇದೆ. ಯಥಾರ್ಥವಾದದ ದೃಷ್ಟಿ ಕೋನದಲ್ಲಿ ರಚನೆಗೊಂಡ ಓನೀಲನ ಪ್ರಭಾವಶಾಲಿ ನಾಟಕವಿದು. ಮಾನವೀಯ ಪ್ರೇರಣೆಗಳನ್ನು ಸರಳಪ್ರವೃತ್ತಿಗಳಾದ ಪ್ರೇಮ, ದ್ವೇಷ, ಕಾಮ ಪ್ರಲೋಭನೆಗಳನ್ನಾಗಿ ಕಂಡು ಆ ಮೂಲಕ ಮಾನವ ಸ್ವಭಾವವನ್ನು ಚಿತ್ರಿಸುವ ತೀವ್ರ ಭಾವಾನಾತ್ಮಕ ನಾಟಕವಿದು. ಗ್ರೇಟ್ ಗಾಡ್ ಬ್ರೌನ್ (1926)-ಯಥಾರ್ಥವಾದದ ಕಿರು ಸಾಂಕೇತಿಕ ನಾಟಕ. ಮಾರ್ಕೊ ವಿಲಿಯಮ್ಸ್ (1928)-ಬಿಗ್ ಬಿಸಿನೆಸ್ ಕುರಿತು ಬರೆಯಲಾದ ಹಾಸ್ಯ ಪ್ರಧಾನ ನಾಟಕ. ಸ್ಟ್ರೇಂಜ್ ಇಂಟರ್‍ಲ್ಯೂಡ್ (1928)- ಒಂಭತ್ತು ಅಂಕಗಳ ದೀರ್ಘ ನಾಟಕ. ಈ ನಾಟಕ ಸ್ವಾಗತ ಮತ್ತು ಏಕಾಂತ ಭಾಷಣಗಳನ್ನು ಬಳಸಿ ಪಾತ್ರಗಳ ಅಂತರಂಗದ ತುಮುಲಗಳನ್ನು ಚಿತ್ರಿಸುತ್ತದೆ. ಆಹ್! ವೈಲ್ಡರ್‍ನೆಸ್ (1933) ಒಂದು ಸುಂದರವಾದ ಹಾಸ್ಯನಾಟಕ.
ಓನೀಲ್‍ಗೆ 1936ರಲ್ಲಿ ನೊಬೆಲ್ ಪಾರಿತೋಷಕ ಬಂದ ಮೇಲೆ ನಾಟಕರಂಗದಿಂದ ದೂರ ಸರಿದ. ಆದರೆ 1946 ರಲ್ಲಿ ತನ್ನ ಐಸ್ ಮ್ಯಾನ್ ಕಮೆತ್ (1939) ಎಂಬ ನಾಟಕವನ್ನು ರಂಗದ ಮೇಲೆ ಪ್ರಯೋಗಿಸಲು ಅನುಮತಿ ನೀಡಿದ. 1956 ರಲ್ಲಿ ಇವನ ಆತ್ಮಚರಿತ್ರೆಯನ್ನು ಒಳಗೊಂಡ ನಾಟಕ ಲಾಂಗ್‍ಡೇಸ್ ಜರ್ನಿ ಇನ್‍ಟು ನೈಟ್ (1940-41) ಸ್ಟಾಕ್‍ಹೋಮ್ ಮತ್ತು ನ್ಯೂ ಯಾರ್ಕ್‍ಗಳಲ್ಲಿ ಪ್ರಯೋಗವಾಯಿತು. ಈ ಪ್ರಯೋಗಗಳಿಂದ ಮತ್ತೆ ಇವನ ನಾಟಕಗಳಲ್ಲಿ ಆಸಕ್ತಿ ಮೂಡುವಂತಾಯಿತು. 

ಥಸ್ರ್ಟ್ ಅಂಡ್ ಒನ್ ಆ್ಯಕ್ಟ್ ಪ್ಲೇಸ್ (1914), ಬೌಂಡ್ ಈಸ್ಟ್ ಫಾರ್ ಕಾರ್ಡಿಫ್(1916), ಗೋಲ್ಡ್ (1920), ಡಿಫರೆಂಟ್ (1921), ದಿ ಸ್ಟ್ರಾ (1921), ವೆಲ್ಡೆಡ್ (1924),ದಿ ಫೌಂಟನ್ (1926), ಡೈನಮೊ (1929) - ಇವು ಇವನ ಇತರ ನಾಟಕಗಳು.

ಜೀವನದ ಕಷ್ಟ, ನೋವು, ಬೇಸರಗಳನ್ನು ದುರಂತ ನಾಟಕಗಳ ಮೂಲಕ ಓನೀಲ್ ಅಭಿವ್ಯಕ್ತಿಸಿದ. ಓನೀಲನ ನಾಟಕಗಳು ಒಂದು ರೀತಿಯಲ್ಲಿ ವಸ್ತುನಿಷ್ಠ ಅನ್ಯೋಕ್ತಿಗಳು. ಇವುಗಳಲ್ಲಿ ನಾಟಕಕಾರನ ಜೀವನದ ಕಥೆಯ ಆಂತರಿಕ ಬೆಳವಣಿಗೆ, ಬದಲಾವಣೆ ಮತ್ತು ಘರ್ಷಣೆಗಳ ನಿರಂತರ ಚಕ್ರವನ್ನು ಕಲಾತ್ಮಕವಾಗಿ ಪ್ರe್ಞÁಪೂರ್ವಕವಾಗಿ ನಾಲ್ಕು ಘಟ್ಟಗಳಲ್ಲಿ (ಬಿಲಾಂಗಿಂಗ್, ಬಿಕಮಿಂಗ್, ಬೀಯಿಂಗ್, ನಥಿಂಗ್‍ನೆಸ್)ನಿರೂಪಿಸಿರುವುದು ವಿಶೇಷವಾಗಿದೆ.

ಓನೀಲ್‍ನ ನಾಟಕಗಳ ಚಿಂತನೆಗಳ ಮೇಲೆ ಇಬ್ಸೆನ್ ಮತ್ತು ಸ್ಟ್ರಿಂಡ್‍ಬರ್ಗ್‍ರ ಸ್ವಭಾವ ತೀವ್ರವಾಗಿರುವುದನ್ನು ವಿಮರ್ಶಕರು ಗುರ್ತಿಸಿದ್ದಾರೆ. ರೊಮ್ಯಾಂಟಿಕ್ ಮತ್ತು ಭಾವಾವೇಶ ನಾಟಕಗಳು ಅತ್ಯಂತ ಪ್ರಬಲವಾಗಿದ್ದಾಗ ಹೊಸ ತಂತ್ರದ ವಾಸ್ತವಿಕತೆಯಿಂದ ಕೂಡಿರುವ ಇವನ ದುರಂತ ನಾಟಕಗಳು ಸಮಕಾಲೀನ ರಂಗಭೂಮಿಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದವು ಎನ್ನುವುದು ಮಹತ್ತ್ವದ ವಿಚಾರ. 

ಓನೀಲ್‍ನ ಪ್ರತಿಭೆ ಸಂಕೇತವಾದ, ಪ್ರಾಯೋಗಿಕ ಯಥಾರ್ಥವಾದ, ಅಭಿವ್ಯಕ್ತಿ ವಾದಗಳನ್ನು ಅಮೆರಿಕದ ರಂಗಭೂಮಿ ಕಾಣುವಂತೆ ಮಾಡಿತು. ಇದರಿಂದ ಅಮೆರಿಕದ ರಂಗಭೂಮಿಗೆ ಜಗತ್ತಿನಲ್ಲಿ ಪ್ರಮುಖ ಸ್ಥಾನ ಲಭಿಸುವಂತಾಯಿತು. 1920ರ ದಶಕ ಓನೀಲ್‍ನನ್ನು ಅಮೆರಿಕದ ಅತ್ಯಂತ ಮಹತ್ತ್ವದ ನಾಟಕಕಾರನನ್ನಾಗಿ ಗುರುತಿಸಿತು. ಬಿಯಾಂಡ್ ದಿ ಹೊರೈಸನ್ (1920). ಅನ್ನಕ್ರಿಸ್ಟಿ (1921) ಸ್ಟ್ರೇಂಜ್ ಇಂಟರ್‍ಲ್ಯೂಡ್ (1928), ಲಾಂಗ್ ಡೇಸ್ ಜರ್ನಿ ಇನ್‍ಟು ದಿ ನೈಟ್ (1956) - ಈ ನಾಟಕಗಳಿಗೆ ಪುಲಿಟ್ಜರ್ ಬಹುಮಾನ ದೊರೆತಿದೆ. 
ಓನೀಲ್‍ಗೆ ಸಮಗ್ರ ನಾಟಕಗಳನ್ನು `ದಿ ಪ್ಲೇಸ್ ಆಫ್ ಯೂಜೀನ್ ಓನೀಲ್ ಎಂಬ ಶೀರ್ಷಿಕೆಯಲ್ಲಿ ನವದೆಹಲಿಯ ಈಸ್ಟ್ ವೆಸ್ಟ್ ಪ್ರೆಸ್ ಮೂರು ಸಂಪುಟಗಳಲ್ಲಿ ಪ್ರಕಟಿಸಿದೆ (1989).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ